ಮಹಾಲಿಂಗಮ್, ಟಿ ಆರ್ 		
1920-86 ಕರ್ನಾಟಕ ಸಂಗೀತಪ್ರಪಂಚದಲ್ಲಿ ಬಾಳಿಬೆಳಗಿ ನವಪರಂಪರೆಯನ್ನು ಸ್ಥಾಪಿಸಿದ ಮಹಾಕಲಾವಿದ: ಅತ್ಯಂತ ಸರಳ ವಾದ್ಯವಾದ ಕೊಳಲನ್ನು ತಮ್ಮ ಅದ್ವಿತೀಯ ವಾದನಕೌಶಲದಿಂದ ಪರಮ ಸಂಕೀರ್ಣ ವಾದ್ಯದ ಅಂತಸ್ತಿಗೆ ಏರಿಸಿದ ಯುಗಪುರುಷ; ಕಲೆಯ ಮಹೋನ್ನತ ಆದರ್ಶ ಸಿದ್ಧಿಗಾಗಿ ಜೀವನಪರ್ಯಂತ ತಪಸ್ಸ್ವಾಧ್ಯಾಯನಿರತನಾಗಿದ್ದ ನಾದಯೋಗಿ.

	ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುವಿಡಮರುದೂರು ಗ್ರಾಮದಲ್ಲಿ ರಾಮಸ್ವಾಮಿ ಅಯ್ಯರ್ ಅವರ ಮಗನಾಗಿ 6-11-1926ರಂದು ಜನನ. ನಾಗಸ್ವರಕ್ಕೆ ಪ್ರಸಿದ್ಧವಾದ ಗ್ರಾಮವದು. ಆ ದಿನಗಳ ಸಂಪ್ರದಾಯಾನುಸಾರ ಎಳೆಯ ಮಾಲಿಯನ್ನು (ಜನ ಅವರನ್ನು ಪ್ರೀತಿಯಿಂದ ಕರೆಯುತ್ತಿದ್ದುದು ಹೀಗೆ) ಪ್ರಾಥಮಿಕ ಶಿಕ್ಷಣ ಮತ್ತು ಹಾಡುಗಾರಿಕೆ ಕಲಿಯಲು ದಾಖಲಿಸಲಾಯಿತು. ಆದರೆ ಯಾವುದೇ ತೆರನಾದ ದಿಗ್ಬಂಧನಕ್ಕೆ ಒಳಪಡದ ಈ ಎಳೆ ಜೀವ ಶಾಲೆಗೆ ಶರಣು ಹೊಡೆಯಿತು. ಗಾಯನಕ್ಕೆ ಮಂಗಳ ಹಾಡಿತು. ಸಂಪ್ರದಾಯದ ಸಂಕೋಲೆ ಇದನ್ನು ಬಂಧಿಸಲಾರದಾಗಿತ್ತು. ಈ ಚೇತನ ಅವ್ಯಕ್ತವಾದ ಬೇರಾವುದೋ ಅನುಭವಕ್ಕಾಗಿ ಸದಾ ತುಡಿಯುತ್ತಿತ್ತು.

	ತುಂಬುಸಂಸಾರ, ಹಿರಿಯ ಮಕ್ಕಳು ಸಂಗೀತದ ಸರಳೆ ಕೂಗುವುದು. ಗಮಕ ಕಲಿಯುವುದು ಮತ್ತು ಸಾಹಿತ್ಯ ಉರುಹೊಡೆಯುವುದು ಮಾಲಿಯ ಕಿವಿಗಳ ಮೇಲೆ ಅಯಾಚಿತವಾಗಿ ಬೀಳುತ್ತಿದ್ದುವು. ಯಾರೊ ಊದುತ್ತಿದ್ದ ಕೊಳಲು ಈ ಅಣುಗನನ್ನು ಆಕರ್ಷಿಸಿತು. ಇವನೂ ಅದನ್ನು ಎತ್ತಿಕೊಂಡು ಗಾಳಿ ಊದಿದ- ಅದರಿಂದ ಜೀವನಾದ ಹೊಮ್ಮಿತು. ಹೀಗೆ ಮಹಾಲಿಂಗಮ್ ಕೊಳಲನ್ನು ತಮ್ಮ ಕಲಾ ಮಾಧ್ಯಮವಾಗಿ ಆಯ್ದದ್ದು ಐದರ ಎಳೆ ಹರೆಯದಲ್ಲಿ. ಮೇಲು ನೋಟಕ್ಕೆ ಇದೊಂದು ಆಕಸ್ಮಿಕ. ಆದರೆ ಆ ಗಳಿಗೆ ಸಂಗೀತ ಇವರಲ್ಲಿ ತನ್ನ ಅಭಿವ್ಯಕ್ತಿ ಮಾಧ್ಯಮವನ್ನು ಆಯ್ದುಕೊಂಡಿತು. ಎಂಬ ಸಂಗತಿ ತದನಂತರ ಬೆಳೆವಣಿಗೆಗಳಿಂದ ಸ್ಪಷ್ಟಪಡುತ್ತದೆ. ಇಲ್ಲಿಂದ ಮುಂದಕ್ಕೆ ಇವರ ಸಂಗೀತ ವ್ಯಕ್ತಿತ್ವವನ್ನು ರೂಪಿಸಿದ ಪ್ರಭಾವಗಳೆಂದರೆ ಕೇಳ್ಮೆ, ಶಾಸ್ತ್ರಗ್ರಂಥಗಳ ಅಧ್ಯಯನ ಮತ್ತು ತಂದೆಯ ಕಟ್ಟು ನಿಟ್ಟು ನಿರ್ದೇಶನ. ಈತ ಕವಾಯತಿ ಶಿಸ್ತಿನ ಸಾಮೂಹಿಕ ಏಕತಾನತೆಗೆ ಎಂದೂ ಹೊಂದಿಕೊಳ್ಳುವ ಒಂಟಿಸಲಗ ಎಂಬುದು ಅ ವೇಳೆಗೆ ಸ್ಥಿರಪಟ್ಟಿತ್ತು.

	 ಇವರ ಪ್ರಥಮ ಸಾರ್ವಜನಿಕ ಸಂಗೀತ ಕಛೇರಿ ಮದ್ರಾಸಿನ ತ್ಯಾಗರಾಜೋತ್ಸವದಲ್ಲಿ ಏರ್ಪಟ್ಟಿತ್ತು. ಆಗ ವಯಸ್ಸು ಕೇವಲ ಏಳು ವರ್ಷ. ಆ ಸಭೆಯಲ್ಲಿ ಹಾಜರಿದ್ದ ಹಿರಿಯ ಸಂಗೀತ ವಿದ್ವಾಂಸರೊಬ್ಬರು ಈ ಬಾಲಕನ ಅಸಾಧಾರಣ ಪ್ರತಿಭೆಗೆ ಮನಸೋತು ಈತನಿಗೆ ಶಾಲು ಹೊದಿಸಿ ಆಶೀರ್ವದಿಸಿದರು. ಇವರದು ಸ್ವಯಂಸ್ಫೂರ್ತ ಮನೋಧರ್ಮ, ಕೃಷಿವರ್ಧಿತ ಮನೋಧರ್ಮವಲ್ಲ. ಅಂದರೆ ರಾಗ, ಕೃತಿ, ಪರಿಸರ ಮುಂತಾದ ಅಸಂಖ್ಯಗುಣಗಳನ್ನು ಆಧರಿಸಿ ಇವರ ವ್ಯಕ್ತಿತ್ವದ ಆಳದಿಂದ ಉದ್ಭವಿಸುವ ನವಸೃಷ್ಟಿಗಳು. ತರುವಾಯದ ದಿನಗಳಲ್ಲಿ ಮಹಾಲಿಂಗಮ್ ಮತ್ತು ಕೊಳಲು ಪರ್ಯಾಯನಾಮಗಳಾಗಿ ಬೆಳೆದು ಅರಳಿದುವು. ಈ ಅವಿನಾಭಾವದ ರಹಸ್ಯ ಅರಿಯಲು ಮಹಾಲಿಂಗಮ್ ಪೂರ್ವದಿನಗಳಲ್ಲಿ ಕೊಳಲಿನ ಅಂತಸ್ಸು ಏನಿತ್ತು ಎಂದು ತಿಳಿಯುವುದು ಅಗತ್ಯ.
	 ಅಂದಿನ ವೇಣುವಾದನ ಕ್ರಮವೆಂದರೆ ತಗ್ಗುಶ್ರುತಿ. ಗಮಕಗಳ ಗೈರುಹಾಜರಿ ಮತ್ತು ಕೊಳವೆ ಊದಿದಂತೆ ಬುಸು ಬುಸು ಎಂದು ಊದುವುದು. ಶ್ರುತಿ ಲೀನವಾಗುತ್ತಿದ್ದುದು ಅತಿ ವಿರಳ. ಹಾರ್ಮೋನಿಯಮ್ಮಿನ ಮೆಟ್ಟಲು ನಡೆ ಇದರ ಶೈಲಿ. ಕಲೆಗಿಂತ ಯಾಂತ್ರಿಕತೆಯ ಕಡೆಗೆ, ಭಾವವಿಸ್ತಾರಕ್ಕಿಂತ ತಾಳ ಪ್ರಸಾರದ ಕಡೆಗೆ ರಾಗಭಾವಕ್ಕಿಂತ ಅಂಗಚೇಷ್ಟೆಗಳ ಕಡೆಗೆ ಒತ್ತು ಜಾಸ್ತಿ. ಸಹಜವಾಗಿಯೇ ಈ ವಾದ್ಯ ಇತರ ನಾಜೂಕು ವಾದ್ಯಗಳಾದ ವೀಣೆ. ಪಿಟೀಲು, ನಾಗಸ್ವರ ಮುಂತಾದವುಗಳ ಜೊತೆ ಹೋಲಿಸಿದಾಗ ಯಾವ ಸ್ಥಾನವನ್ನೂ ಪಡೆದಿರಲಿಲ್ಲ. ಗೊಲ್ಲನ ಪೀಪಿಗೆಲ್ಲಿಂದ ಬರಬೇಕು ವೀಣೆಯ ಮೆಲ್ಲುಲಿತ!

	ಮಹಾಲಿಂಗಮ್ ರಂಗಪ್ರವೇಶಿಸುವ ಮೊದಲು ಕೊಳಲಿನ ಶೈಲಿ ಬೇರೆ ರೀತಿಯಲ್ಲಿತ್ತು. ಮಧುರನಾದವಾಗಲಿ ನಮ್ಮ ಸಂಗೀತದ ಜೀವನಾಡಿಯಾದ ಗಮಕ ಅಥವಾ ಅನುಸ್ವರಗಳಾಗಲಿ ಅದರಲ್ಲಿ ಪ್ರಕಟವಾಗುತ್ತಿರಲಿಲ್ಲ. ರಾಗ ಭಾವ ಮತ್ತು ಸೌಖ್ಯ ಗೈರುಹಾಜರು. ಆಗಲೂ ಈಗಿನಂತೆಯೇ ವೇಣುವಾದಕರು ಹಾಡುಗಾರಿಕೆಯ ಧಾಟಿಯನ್ನೇ ಅನುಸರಿಸುತ್ತಿದ್ದರೂ ಕೃತಿಗಳನ್ನು ನುಡಿಸುವಾಗ ಸಾಹಿತ್ಯ ಮತ್ತು ವಾದನಗಳ ನಡುವೆ ಸಾಮರಸ್ಯ ಏರ್ಪಡುತ್ತಿರಲಿಲ್ಲ. ಇಂಥ ಸಮಯದಲ್ಲಿ ಮಹಾಲಿಂಗಮ್ ವೇಣುವಾದನದಲ್ಲಿ ಒಂದು ಕ್ರಾಂತಿಯನ್ನೇ ಸಾಧಿಸಿದರು. ಶ್ರುತಿಯೊಂದಿಗೆ ಪೂರ್ಣ ಲೀನವಾದ ಬಲಿಷ್ಠ ಮತ್ತು ಸುಮಧುರನಾದ ಪ್ರವಾಹ. ರಾಗಗಳ ಭಾವಪೂರಿತ ವಿಸ್ತರಣೆ. ಕೃತಿಗಳನ್ನು ಹಾಡುಗಾರಿಕೆಯಲ್ಲಿಯಂತೆಯೇ ನುಡಿಸಲು ಸಾಧ್ಯವಾಗುವಂತೆ ವಿಶೇಷ ವಾದನತಂತ್ರದ ಆಳವಡಿಕೆ. ಕೊಳಲಿನಲ್ಲಿ ಹಿಂದೆ ಯಾರೂ ಪ್ರಯತ್ನಿಸದೆ ಇದ್ದಂಥ ಗಮಕಗಳ ಪ್ರಯೋಗ ಇವು ಅದರ ಯುಗಪ್ರವರ್ತಕ ಸಾಧನಗಳು. ಅವರು ಊದಿಕೆ ತಂತ್ರ, ಬೆರಳಾಡಿಕೆ ತಂತ್ರ ಮತ್ತು ತುತ್ತೂಕಾರ ತಂತ್ರ ಇವನ್ನು ಪ್ರಪ್ರಥಮವಾಗಿ ಪ್ರವರ್ತಿಸಿ ಸಾಧಿಸಿದರು.

	4 ರಿಂದ 5.5 ಮನೆವರೆಗಿನ ತಾರಶ್ರುತಿಯ ಕೊಳಲನ್ನು ಅವರು ತಮ್ಮ ಮಾಧ್ಯಮವಾಗಿ ಆಯ್ದರು. ಮಂದ್ರಶ್ರುತಿಯ ಕೊಳಲು (2ರಿಂದ 3) ಕೊಳಲೇ ಅಲ್ಲ. ಕೊಳವೆ ಎಂದು ಅದನ್ನು ತಿರಸ್ಕರಿಸಿದರು. ಊದಿಕೆಯಲ್ಲಿ ವಿಶಿಷ್ಟ ಕ್ರಮವಿಲ್ಲದಿದ್ದರೆ ಶಕ್ತಿವೃಥಾ ಹ್ರಾಸವಾಗಿ ಶುದ್ಧನಾದ ಹೊಮ್ಮುವುದೇ ಇಲ್ಲ ಎಂಬುದು ಅವರಿಗೆ ಚೆನ್ನಾಗಿ ತಿಳಿದಿತ್ತು. ಬೆಳಕಿನ ಸಾಧಾರಣ ದೂಲಕ್ಕೂ ಲೇಸರ್ ದೂಲಕ್ಕೂ ನಡುವೆ ಇರುವಂಥ ವ್ಯತ್ಯಾಸವಿದು; ಮೊದಲನೆಯದರಲ್ಲಿ ಶಕ್ತಿ ಹ್ರಾಸವಾಗಿ ನಿರ್ದಿಷ್ಟ ಉದ್ದೇಶ ಈಡೇರದಿದ್ದರೆ ಎರಡನೆಯದರಲ್ಲಿ ಅದು ಸಂವರ್ಧಿತವಾಗಿ ಉದ್ದೇಶ ಚೆನ್ನಾಗಿ ಸಿದ್ಧಿಸುತ್ತದೆ. ಊದಿತಂತ್ರ ಬಲಿಷ್ಠ ಸುಮಧುರ ನಾದ ಸ್ರೋತಸ್ಸು ಪ್ರವಹಿಸಲು ಕಾರಣವಾದರೆ ತುತ್ತೂಕಾರತಂತ್ರ ಸಾಹಿತ್ಯದ ಸ್ಪಷ್ಟ ಉಚ್ಚಾರಣೆಗೆ ನೆರವಾಗುತ್ತದೆ. ಇನ್ನು ಬೆರಳಾಡಿಕೆ ತಂತ್ರ ಕರ್ನಾಟಕ ಸಂಗೀತದ ಜೀವನಾದಿಯಾದ ಗಮಕ ಹಾಗೂ ಅನುಸ್ವರಗಳ ಪ್ರಕಟಣೆಯನ್ನು ಸಾಧ್ಯವಾಗಿಸುತ್ತದೆ. ಈ ತಂತ್ರಗಳ ಅಳವಡಿಕೆಯಿಂದ ಕೊಳಲಿನಲ್ಲಿ ಕರ್ನಾಟಕ ಸಂಗೀತದ ಸಕಲ ಸಾಧ್ಯತೆಗಳನ್ನೂ-ಭಾವವಿಸ್ತಾರ, ಗಮಕವೈವಿಧ್ಯ, ನಾದಸೌಖ್ಯ. ಕಲ್ಪನಸ್ವರವಿನ್ಯಾಸ ಇತ್ಯಾದಿ-ಇತರ ಯಾವುದೇ ವಾದ್ಯದಷ್ಟು ಪರಿಪೂರ್ಣವಾಗಿಯೂ ಆಕರ್ಷಣೆವಾಗಿಯೂ ನಿರ್ವಹಿಸಬಹುದಾಗಿದೆ.

	ಮಹಾಲಿಂಗಮ್ ಅವರ ವೇಣುವಾದನದಲ್ಲಿ ಈ ಎಲ್ಲ ಅಂಶಗಳಿಗೂ ಸಮೃದ್ಧವಾಗಿ ಮತ್ತು ಸುಪುಷ್ಟವಾಗಿ ಎರಕಗೊಂಡು ಅವರೊಬ್ಬ ವಿನೂತನ ಶೈಲಿಯ ಪ್ರವರ್ತಕರಾದರು. ಅವರು ಕೊಳವೆತ್ತಿ ಕೇವಲ ಶ್ರುತಿ ಹಿಡಿದರೆ ಸಾಕು ರಸಿಕರಲ್ಲಿ ಆನಂದೋತ್ಸಾಹ ತುಳುಕುತ್ತಿತ್ತು -ಅದರ ಶ್ರುತಿಶುದ್ಧತೆಯಿಂದ, ಗಾತ್ರದಿಂದ ಅಖಂಡತೆಯಿಂದ ಮತ್ತು ನಾದಮಾಧುರ್ಯದಿಂದ, ಸಾಹಿತ್ಯ ನುಡಿಸುವಾಗ ರಸಿಕರು ಪರಪುಂಜಗಳನ್ನು ವಿವಿಕ್ತವಾಗಿ ಬೇರ್ಪಡಿಸಿಕೊಂಡು ಸಂಗೀತರಸದ ಜೊತೆಗೆ ಸಾಹಿತ್ಯ ಸೌಂದರ್ಯವನ್ನೂ ಸವಿಯಬಹುದಾಗಿತ್ತು. ಯಾವುದೇ ರಾಗ ಆಯ್ದುಕೊಂಡರೂ ಅದರ ಆಂತರಿಕ ಸೌಂದರ್ಯ, ರಾಚನಿಕ ಭವ್ಯತೆ ಮತ್ತು ಕೇಳಿ ಅರಿಯದ ಅದರ ಒಂದು ಮುಖವನ್ನು ಪ್ರದರ್ಶಿಸುತ್ತಿದ್ದುದು ಅವರ ಹಿರಿಮೆ.

	ಕಲ್ಪನಸ್ವರಪ್ರಸ್ತಾರದಲ್ಲಿ ಇವರೊಂದು ದಾಖಲೆಯನ್ನೇ ಸ್ಥಾಪಿಸಿದರು. ಮೃದಂಗದ ನಡೆಗಳಿಗೆ ಆಯಾರಾಗದ ಸ್ವರಗಳನ್ನು ಪೋಣಿಸಿದರೆ ಕಲ್ಪನಸ್ಪರ ಪ್ರಸ್ತಾರವಾಗುವುದೆಂಬುದು ಸಾಮಾನ್ಯ ಭಾವನೆ. ಉದಾಹರಣೆಗೆ ಮೃದಂಗದ ತದ್ಧಿಂಗಿಣತೊ ನಡೆ ಕಲ್ಪನಸ್ಪರಗಳಲ್ಲಿ ಗರ್ರಿಸ್ಸನಿಧ ಎಂದಾಗುತ್ತದೆ. ಇಂಥ ಜೋಡಣೆಗಳು ತಮ್ಮ ಯಾಂತ್ರಿಕತೆಯಿಂದ ಹಾಗೂ ಸಾಚೆಸಿದ್ದ (ಸ್ಟೀರಿಯೊಟೈಪ್ಡ್) ರಚನೆಗಳಿಂದ ರಸಿಕರಲ್ಲಿ ಬಲು ಬೇಗ ಬೇಸರಿಕೆ ತರುತ್ತವೆ. ಮಹಾಲಿಂಗಮ್ ಈ ನೀರಸ ವಿಧಾನವನ್ನು ಪೂರ್ಣವರ್ಜಿಸಿ ಕಲ್ಪನಸ್ವರಗಳಿಗೆ ಅವುಗಳ ಹೆಸರಿಗೆ ತಕ್ಕಂತೆ ತಮ್ಮ ಕಲ್ಪನೆಯಿಂದ ಜೀವ ತುಂಬಿದರು. ಅಲಾಪನೆ (ಅಂದರೆ ರಾಗವಿಸ್ತಾರ) ಮತ್ತು ನೆರವಲ್‍ಗಳಲ್ಲಿ (ಅಂದರೆ ಸಾಹಿತ್ಯ ವಿಸ್ತಾರ) ಪ್ರದರ್ಶಿಸಲಾಗದ ರಾಗ ಭಾವವನ್ನು ಸಂಗೀತದ ಈ ಭಾಗದಲ್ಲಿ ಬಿತ್ತರಿಸುವುದು ಇವರ ಸಿದ್ದಿ.

	ತಾರ ಶ್ರುತಿಯ ಕೊಳಲಿನಲ್ಲಿ ಐರಾವತಗತಿಯ ಮುನ್ನಡೆ ಇವರ ವೈಶಿಷ್ಟ್ಯ- ಅತ್ಯಂತ ಸಪುರವೂ ಬಿಗಿಯೂ ಆದ ಸರಿಗೆಯ ಮೇಲೆ ಅತಿ ನಿಧಾನವೂ ದೃಢವೂ ಆಗಿ ನಡೆಯುವಂಥ ಸಾಹಸ. ಒಂದೊಂದು ಸ್ವರಕ್ಕೂ ಇವರು ಪೋಣಿಸುತ್ತಿದ್ದ ಅನುಸ್ವರಗಳು ಮಾಧುರ್ಯದ ಹೆಗ್ಗಡಲನ್ನೇ ಉಕ್ಕಿಸುತ್ತಿದ್ದುವು. ಇಡೀ ಸಭಾಂಗಣವೇ ತುಂಬುನಾದದಿಂದ ಸೇಚನೆಗೊಂಡಂಥ ಅನುಭವ. ಹೀಗೆ ಕ್ರಮಕ್ರಮವಾಗಿ ಮತ್ತು ಸಾವಕಾಶವಾಗಿ ಸಂಗೀತಸೌಧ ಕಟ್ಟುತ್ತಿದಂತೆಯೇ ಮಿಂಚಿ ವೇಗದಲ್ಲಿ ಹಲವಾರು ಬಿರ್ಕಾಗಳನ್ನು ಉಡಾಯಿಸಿ ರಸಿಕರನ್ನು ಬೆರಗುಗೊಳಿಸಿ ಮುಗ್ಧ ಚೇಷ್ಟೆ ನಗುಬೀರುತ್ತಿದ್ದುದೂ ಇತ್ತು. ಮಂದ್ರದಲ್ಲಿ ದೃಢತೆ ತಾರದಲ್ಲಿ ಖಚಿತತೆ, ನಿಧಾನಗತಿಯಲ್ಲಿ ಭಾಹಚಟುಲತೆ ಮತ್ತು ತೀವ್ರ ಗತಿಯಲ್ಲಿ ರಾಗಶುದ್ಧತೆ ಇವರ ಶೈಲಿಯಲ್ಲಿ ಅದ್ಭುತವಾಗಿ ಅನುರಣಿಸುತ್ತಿದ್ದುವು.

	ಸಂಗೀತ ಪ್ರಪಂಚದಲ್ಲಿ ಇವರು ಅದ್ವಿತೀಯ ಯುಗಪುರುಷರಾಗಿ ರಾರಾಜಿಸುತ್ತಿದ್ದಾಗಲೇ ವ್ಯಕ್ತಿ ಮಟ್ಟದಲ್ಲಿ ತೀವ್ರ ಏಕಾಂಗಿತ್ವದಿಂದ ನವೆಯುತ್ತಿದ್ದರು: ತಮ್ಮ ಯಾವ ಕಚೇರಿಯಲ್ಲಿಯೂ ಪರಿಪೂರ್ಣತೆ ಇರುವುದು ಸಾಧ್ಯವಾಗಿಲ್ಲ, ತಮ್ಮಲ್ಲಿ ಪುಂಖಾನುಪುಂಖವಾಗಿ ಪ್ರವಹಿಸುವ ಸಮಸ್ತ ಭಾವನೆಗಳಿಗೂ ಅಭಿವ್ಯಕ್ತಿ ಕೊಡಲಾಗಿದಿರುವುದು ತಮ್ಮ ಮಹಾವೈಫಲ್ಯ. ಆದ್ದರಿಂದ ತಾವು ಸಾಮಾನ್ಯರಲ್ಲಿ ಕೇವಲ ಸಾಮಾನ್ಯ ವ್ಯಕ್ತಿ ಎಂಬುದೇ ಇವರ ಭಾವನೆ. ಜಗತ್ತೆಲ್ಲ ಇವರನ್ನು ಜೀನಿಯಸ್ (ಪ್ರಚಂಡ ಪ್ರತಿಭಾವಂತ) ಎಂದು ಕೊಂಡಾಡುತ್ತಿದ್ದಾಗ ಇವರು ಮಾತ್ರ ಮುಗ್ಧ ಮಗುವಿನಂತೆ ತಾವು ಏನೂ ಅಲ್ಲ ಎಂದೇ ಸಾಧಿಸುತ್ತಿದ್ದರು.

	ತತ್ತ್ವಶಾಸ್ತ್ರ, ಅನುಭಾವ ಮುಂತಾದ ಅಮೂರ್ತ ವಿಚಾರ ಚಿಂತನೆ ಗ್ರಂಥ ವಚನ, ಸ್ನೇಹಿತರೊಡನೆ ಸಂವಾದ, ಕ್ರಿಕೆಟ್ ಕ್ರೀಡಾವಿಮರ್ಶೆ ಮುಂತಾದವು ಮಾಲಿಯವರ ಪ್ರಿಯಹವ್ಯಾಸಗಳು. ನನಗೆ ಸಂಗೀತದಲ್ಲಿ ಒಂದಿಷ್ಟೂ ಆಸಕ್ತಿ ಇಲ್ಲವೆಂದು ಇವರು ಪದೇ ಪದೇ ಹೇಳುತ್ತಿದ್ದರು. ಕೊಳಿಲಿಗಿಂತ ಪಿಟೀಲನ್ನು ಚೆನ್ನಾಗಿ ನುಡಿಸಬಲ್ಲೆ ಎಂದು ಹೇಳಿಕೊಂಡಿದ್ದಾರೆ. ಇವರ ಖಾಸಗಿ ಪಿಟೀಲುವಾದನ ಆಲಿಸಿರುವ ಅನೇಕ ಪರಿಣತರು ಇವರು ಪಿಟೀಲಿನಲ್ಲಿಯೂ ಒಬ್ಬ ಜೀನಿಯಸ್ ಆಗಿದ್ದರು ಎನ್ನುತ್ತಾರೆ. ಬದುಕಿನಲ್ಲಿ ನಾನು ಎಲ್ಲವನ್ನೂ ಅವನ ವಶಕ್ಕೆ ಒಪ್ಪಿಸಿ ಬಿಟ್ಟಿದ್ದೇನೆ ಎಂಬುದು ಮಹಾಲಿಂಗಮ್ ಅವರ ನಿಲವು.

	ಯೌವನೋತ್ತರ ದಿನಗಳಲ್ಲಿ ಇವರು ಸಂಗೀತದಿಂದ ದೂರವಾದರೋ ಎನ್ನುವ ಭಾವನೆ ರಸಿಕರಲ್ಲಿ ಮೂಡುವಂತೆ ಸನ್ನಿವೇಶಗಳು ಮರುಕಳಿಸುತ್ತಿದ್ದುವು. ಕಾರ್ಯಕ್ರಮಗಳನ್ನು ಕೊನೆಗಳಿಗೆಯಲ್ಲಿ ರದ್ದು ಗೊಳಿಸುವುದು, ತಡವಾಗಿ ಬಂದು ವೇದಿಕೆಯ ಮೇಲೆ ಹೊಸ ಪ್ರಯೋಗಗಳನ್ನು ಎತ್ತಿಕೊಳ್ಳುವುದು, ಸಾಹಿತ್ಯವನ್ನು ಮರೆತು ಕೇವಲ ರಾಗಭಾವದ ಮೇಲೆ ಪುಂಗಿ ಊದುವುದು ಇತ್ಯಾದಿ. ಇವು ಒಬ್ಬ ಗರ್ವಾಂಧೆ ಕಲಾವಿದಾನ ಅಹಂಕಾರದ ಪ್ರಕಟಿತ ರೂಪಗಳಲ್ಲ. ಬದಲು ಒಬ್ಬ ಮಹಾಕಲಾವಿದನ ನೆಲೆಗಾಣದ ಅಲೆತದ ಲಕ್ಷಣಗಳು ಎಂಬುದು ರಸಿಕರಿಗೆ ಚೆನ್ನಾಗಿ ತಿಳಿಯುತ್ತಿತ್ತು. ಹೀಗಾಗಿ ಮಾಲಿ ಏನು ಮಾಡಿದಿದ್ದರೂ ಅವನ್ನು ಜನ ತಾಳ್ಮೆಯಿಂದ ಸಹಿಸುತ್ತಿದ್ದರು. ಅವರಿಗೆ ಲಹರಿ (ಮೂಡ್) ಎಂದು ಬಂದೀತು, ಬಂದಾಗ ಎಂಥ ದೈವಿಕ ನಾದ ಹೊಮ್ಮೀತು. ಆಗ ತಮಗೆ ಎಂಥ ಕೃತಾರ್ಥಭಾವ ಲಭಿಸೀತು ಎಂದು ಜನ ವಿಶ್ವಾಸದಿಂದ ಕಾಯುತ್ತಿದ್ದರು. ಮಾಲಿ ಕೊಳಲೆತ್ತಿದಾಗ-ಅವರ ತೀರ ಕೊನೆಯ ದಿನಗಳಲ್ಲೂ ಆಗ ಅವರು ಕೈ ಮೂಳೆ ಮುರಿತದ ನೋವಿನಿಂದ ನರಳುತ್ತಿದ್ದರೂ-ಈ ವಿಶ್ವಾಸ ಹುಸಿ ಆಗಲಿಲ್ಲ. 1985ರ ದಸರಾ ಸಂಗೀತೋತ್ಸವದ ಸಂದರ್ಭದಲ್ಲಿ ಮೈಸೂರು ಅರಮನೆಯ ದರ್ಬಾರ್ ಸಭಾಂಗಣದಲ್ಲಿ ನೀಡಿದ ಕಚೇರಿಯೇ ಕೊನೆಯ ಪೂರ್ಣವಧಿ ಬ್ಶೆಠಕ್.

	ದೇಶವಿದೇಶಗಳಲ್ಲಿ ಮಹಾಲಿಂಗಮ್ ಖ್ಯಾತನಾಮರು. ಇವರಿಗೆ ಬಂದ ಪ್ರಶಸ್ತಿ ಪುರಸ್ಕಾರಗಳು ಅವೆಷ್ಟೋ. 1986ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಅಯಾಚಿತವಾಗಿ ಬಂದಾಗ. ಈ ಹಿಂದೆ ಇತರ ಹಲವು ಪ್ರಶಸ್ತಿಗಳನ್ನು ತಿರಸ್ಕರಿಸಿದಂತೆ, ಅದನ್ನೂ ನಿರಾಕರಿಸಿದರು. ಆಡಂಬರ ಅಥವಾ ಅನುಗ್ರಹ ಕಂಡಲ್ಲಿ ಇವರು ಮೂಕರಾಗಿ ತಮ್ಮ ಅಸಮ್ಮತಿ ಸೂಚಿಸುತ್ತಿದ್ದರು. ಸಮಾಜ. ವ್ಯಕ್ತಿ, ಜೀವನ ಮುಂತಾದವನ್ನು ಕುರಿತಂತೆ ಅತ್ಯಂತ ಕಾಳಜಿ ಇದ್ದರೂ ಹಲವು ಸಂದರ್ಭಗಳಲ್ಲಿ ಅತಿನಿಷ್ಠುರ ಸಿನಿಕತನ ಕೂಡ ವ್ಯಕ್ತಪಡಿಸಬಲ್ಲವರಾಗಿದ್ದರು. ಇವರ ಜೊತೆ ದೀರ್ಘಕಾಲ ನಿಕಟ ಸಂಪರ್ಕವಿಟ್ಟುಕೊಂಡಿದ್ದ ಮಿತ್ರರೆಲ್ಲರೂ ಅರಿತಿರುವ ಸಂಗತಿ ಒಂದುಂಟು: ಇವರು ಸಭ್ಯರು, ಮುಗ್ಧರು, ನಿಷ್ಕಪಟಿಗಳು, ತಮ್ಮ ಹಿರಿಮೆಯನ್ನು ಅರಿಯದ ನಿಗರ್ವಿಗಳು, ಸದಾ ಯಾವುದೋ ಒಂದು ಅವ್ಯಕ್ತ ಚೇತನ ತುಡಿತಕ್ಕೆ ಸ್ಪಂದಿಸುತ್ತಿದ್ದ ಅತೃಪ್ತರು. ಎಲ್ಲಕ್ಕೂ ಮಿಗಿಲಾಗಿ ಮಹಾ ಕಲಾವಿದರು. ಇವರು ಸಂಗೀತ ಕುರಿತಂತೆ ಮೂಲಭೂತ ಯಂತನೆ ನಡೆಸಿ ಸಂಶೋಧನಾತ್ಮಕ ಪ್ರಬಂಧ ರಚಿಸಿದ್ದಾರೆ. ಆದರೆ ಯಾವುದೂ ಪ್ರಕಟವಾಗಿಲ್ಲ.

	ಪ್ರಪಂಚದ ಸಾರ್ವಕಾಲಿಕ ಮಹಾಕಲಾವಿದರಾದ ಮಹಾಲಿಂಗಮ್ 31 ಮೇ 1986ರಂದು ಆಕಸ್ಮಿಕ ಹೃದಯಾಘಾತದಿಂದ ಮದ್ರಾಸಿನಲ್ಲಿ ನಿಧನರಾದರು. ಅವರು ಸ್ವಯಂ ಶಿಕ್ಷಿತರು, ಸ್ವಯಂಯತರು, ಸ್ವಯಂ ಪರಿಪೂರ್ಣರಾದವರು ಮತ್ತು ದುರದೃಷ್ಟ, ಸ್ವಯಂ ನಾಶಗೊಂಡವರು ಎಂಬುದಾಗಿ ಸಂಗೀತವಿದರೊಬ್ಬರು ಹೇಳಿರುವ ಮಾತು ನಿಜ. ಬೀತೋವನ್ನವಂತೆ ಇವರು ಕೂಡ ನಾನೇನಾಗಿದ್ದೇನೋ ಅದು ಪೂರ್ತಿ ನನ್ನದೇ ಎಂದು ಸಾಧಿಸಬಹುದಾಗಿತ್ತು.

	ಮಹಾವಸ್ತು: ಮಹಾಸಾಂಫಿಕ-ಲೋಕೋತ್ತರವಾದಿಗಳ ವಿನಯಪಿಟಕದ ಪಾಠದಲ್ಲಿ ಸೇರಿರುವ ಮಹಾವಸ್ತು ಅವದಾನವೆಂದು ಪರಿಗಣಿತವಾಗಿದೆ. ಈ ಗ್ರ್ರಂಥದ ಪ್ರಮುಖ ವಿಷಯವೆಂದರೆ ಬುದ್ಧನ ಜೀವಿತ. ಹೀನಯಾನ ಸಂಪ್ರದಾಯಕ್ಕೆ ಸೇರಿದ ಗ್ರಂಥವಾದರೂ ಇದರಲ್ಲಿ ಅದ್ಭುತ ನಿರೂಪಣೆ ಎದ್ದು ಕಾಣುತ್ತದೆ. ಪಾಳಿಪಿಟಕದ ಮಹಾವರ್ಗವನ್ನು ಆರಂಭದಲ್ಲಿ ಅವಲಂಬಿಸಿದರೂ ಮುಂದೆ ಮುಂದೆ ಹೇರಳವಾದ ಜಾತಕ ಕಥೆಗಳೂ ಅವದಾನಗಳೂ ಬರುತ್ತದೆ. ಇವುಗಳಲ್ಲಿ ಹಲವು ಕಥೆಗಳು ಪಾಳಿಗ್ರಂಥಗಳಲ್ಲಿ ಕಾಣಸಿಗುವುದಿಲ್ಲ. ಸ್ಥವಿರವಾದವೇ ಮುಖ್ಯವಾದ ಗುಣವಾದರೂ ಮಹಾಯಾನದ ವಿವರಗಳು ಹಲವಾರು ಇಲ್ಲಿ ಸೇರಿಕೊಂಡಿವೆ. ಇಲ್ಲಿ ಬರುವ ದಶಭೂಮಿಗಳ ಪ್ರಸ್ತಾಪ. ಬೋಧಿಸತ್ತ್ವನೆ ಪಾರಮಿಗಳು, ಬುದ್ಧಕ್ಷೇತ್ರದ ವರ್ಣನೆ ಬೋಧಿಸತ್ತ್ವದ ಅಲೌಕಿಕ ಜನ್ಮ ಇವೆಲ್ಲ ಹೀನಯಾನಕ್ಕೆ ಹೊಸವಿವರಗಳು. ಎಂದರೆ ಮಹಾಯಾನಪಂಥ ಸ್ಪಷ್ಟವಾಗಿ ರೂಪತಳೆಯುವ ಮುನ್ನವೇ ನಿರ್ಮಿತವಾದ ಗ್ರಂಥ ಇದು. ಆದರೆ ಚೀನೀಭಾಷೆ ಮತ್ತು ಲಿಪಿಗಳ, ಹೂಣರ ಹೋರಾಚಾಠಕರ ಪ್ರಸ್ತಾಪವಿರುವುದರಿಂದ ಮಹಾವಸ್ತುವಿನ ಮೂಲಪಾಠ ಕ್ರಿಸ್ತಾಬ್ದ ನಾಲ್ಕನೆಯ ಶತಮಾನದ ವೇಳೆಗೆ ಮುಗಿಯಿತು ಎಂದು ವಿದ್ವಾಂಸರ ಅಭಿಪ್ರಾಯ.

	ಮಹಾವಸ್ತುವಿನ ಭಾಷೆ ಸಂಸ್ಕøತವಾದರೂ ಅಪಭ್ರಷ್ಟ; ಹಿಂದಿನ ಹೀನಯಾನ ಗ್ರಂಥಗಳಂತೆ ಪ್ರಾಕೃತವೂ ಅಲ್ಲ. ಮಹಾಯಾನಗ್ರಂಥಗಳಂತೆ ಸ್ವಚ್ಛ ಸಂಸ್ಕøತವೂ ಅಲ್ಲ. ಮುಂದಿನ ಮಹಾಯಾನಗ್ರಂಥಗಳಂತೆ ಸ್ವಚ್ಛ ಸಂಸ್ಕøತವೂ ಅಲ್ಲ. ಪಾಕೃತಮಿಶ್ರವಾದ ವ್ಯಾಕರಣದ ದೃಷ್ಟಿಯಲ್ಲಿ ಅಬದ್ಧವಾದ ಸಂಸ್ಕøತ. ಇದು ಮಹಾವಸ್ತುವಿನ ಪ್ರಾಚೀನತೆಯನ್ನು ಸೂಚಿಸುತ್ತದೆ. ಈ ಗ್ರಂಥದ ಶೈಲಿಯಲ್ಲಾಗಲೀ ವಸ್ತುವಿನ್ಯಾಸದಲ್ಲಾಗಲೀ ಏಕತಾನವಿಲ್ಲ. ಬುದ್ಧನ ಜೀವಿತಪ್ರಸಂಗಗಳನ್ನು ನಿರೂಪಿಸುವುದು ಮುಖ್ಯ ವಿಚಾರವಾದರೂ ನೂರಾರು ಅಪ್ರಸ್ತುತ ಪ್ರಸ್ತಾಪಗಳ ಗೊಂದಲದಲ್ಲಿ ಈ ಎಳೆಗಳನ್ನು ಕಾಣುವುದೇ ಕಷ್ಟವಾಗುತ್ತದೆ. ಕ್ರಮಬದ್ಧವಾದ ನಿರೂಪಣೆಯಿಲ್ಲ. ಒಂದೊಂದು ಪ್ರಸಂಗವೇ ನಾಲ್ಕಾರು ಬಾರಿ ಬರುವುದೂ ಉಂಟು, ಶೈಲಿಯಲ್ಲಿ ಗಾಥೆಗಳೂ ಗದ್ಯವೂ ಸೇರಿವೆ.
ಪ್ರಾಚೀನ ಸಂಪ್ರದಾಯವನ್ನು ಅರಿಯಲು ಮಹಾವಸ್ತು ನೆರವಾಗುತ್ತದೆ. ಪಾಳೀ ವಾಙ್ಮಯದಲ್ಲಿರುವ ವಿವರಗಳೇ ಇಲ್ಲೂ ಹಲವಡೆ ಬರುತ್ತದೆ. ನಿದರ್ಶನಕ್ಕೆ ಇಲ್ಲಿ ಬರುವ ಮಹಾಭಿನಿಷ್ಕ್ರಮಣದ ವರ್ಣನೆ ಮಜ್ಝಿಮ ನಿಕಾಯದ ವರ್ಣನೆಯಂತೆಯೇ ಪುರಾತನವಾದುದು. ಹಾಗೆಯೇ ಧರ್ಮಾಚಕ್ರ ಪ್ರವರ್ತನ ಸೂತ್ರ, ಮಹಾಗೋವಿಂದಸೂತ್ರ, ದೀರ್ಘನಖಸೂತ್ರ, ಮಾರಸಂಯುಕ್ತ, ಕ್ಷುದ್ರಕಪಾಠ, ಪ್ರವ್ರೇಜ್ಯಾಸೂತ್ರ ಪ್ರಧಾನ, ಖಡ್ಗವಿಷಾಣಸೂತ್ರ ಮುಂತಾದವು ಪ್ರಾಚೀನ ಪಾಠವನ್ನೇ ಅವಲಂಬಿಸಿವೆ. ಪಾಳೀ ಬೌದ್ಧಧರ್ಮ ಕಾಲಕ್ರಮದಲ್ಲಿ ಸಂಸ್ಕøತ ಬೌದ್ಧ ಧರ್ಮಕ್ಕೆ ಎಂದರೆ, ಮಹಾಯಾನ ಪಂಥಕ್ಕೆ, ಎಡೆಮಾಡಿಕೊಡುವ ಪರ್ವಕಾಲದಲ್ಲಿ ನಿರ್ಮಿತವಾದ ಮಹಾವಸ್ತು ಬೌದ್ಧಧರ್ಮದ ಕಾಲಕ್ರಮದಲ್ಲಿ ಸಂಸ್ಕøತ ಬೌದ್ಧ ಧರ್ಮಕ್ಕೇ ಎಂದರೆ, ಮಹಾಯಾನ ಪಂಥಕ್ಕೆ, ಎಡಮಾಡಿಕೊಡುವ ಪರ್ವಕಾಲದಲ್ಲಿ ನಿರ್ಮಿತವಾದ ಮಹಾವಸ್ತು ಬೌದ್ಧಧರ್ಮದ ಇತಿಹಾಸವನ್ನು ಸ್ಪಷ್ಟಗೊಳಿಸಲು ಸಹಕಾರಿಯಾಗಿದೆ. 
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ